ಅನುವರ್ಷ ಅವಸಾದನ

ಯಾವ ಅವಸಾದನ (ಸಂಚಯನ) ತಲವಾಗಲಿ ಅಥವಾ ಸ್ತರವಾಗಲಿ ಒಂದು ವರ್ಷದೊಳಗಾಗಿ ನಿಕ್ಷಿಪ್ತವಾದರೆ ಅದಕ್ಕೆ ವಾರ್ವ್ ಅಥವಾ ವಾರ್ಷಿಕವೆಂದು ಹೆಸರು. ಅನುವರ್ಷ ಅವಸಾದನದಲ್ಲಿ (ವಾವ್ರ್ಡ್ ಸೆಡಿಮೆಂಟೇಷನ್) ಎರಡು ರೂಪಗಳನ್ನು ಗುರುತಿಸಬಹುದು. 1. ಹಿಮನದೀಯ ವಾರ್ಷಿಕಗಳು (ಗ್ಲೇಸಿಯಲ್ ವಾರ್ವ್‍ಸ್); 2. ಇತರ ವಾರ್ಷಿಕಗಳು (ನಾನ್‍ಗ್ಲೇಸಿಯಲ್ ವಾರ್ವ್‍ಸ್). ನದೀಜವಾರ್ಷಿಕಗಳು ಹಿಮನದೀಪರವಾದ ಸರೋವರಗಳಲ್ಲಿ ಆ ಯುಗದ ಹಿಮಪುರಾವರ್ತನ ಘಟ್ಟದಲ್ಲಿ ನಿಕ್ಷಿಪ್ತವಾದ ಜೇಡಿಮಣ್ಣು ಮತ್ತು ಮೆಕ್ಕಲುಗಳ ಲಕ್ಷಣವನ್ನು ತಳೆದಿವೆ. ಪ್ರತಿಯೊಂದು ವಾರ್ಷಿಕವೂ ಬೇಸಿಗೆಯ ತೆಳುಬಣ್ಣದ ಮೆಕ್ಕಲುನಿಂದ ಹಿಡಿದು ಚಳಿಗಾಲದ ಕರಿಜೇಡಿಮಣ್ಣಿನ ದರ್ಜೆಯವರೆಗಿನ ನಿಕ್ಷಿಪ್ತಗಳ ಯುಗ್ಮವಾಗಿದೆ. ಸಾಮಾನ್ಯವಾಗಿ ಪದರಗಳ ಬಣ್ಣ ತೆಳುಬೂದಿನಿಂದ ಹಿಡಿದು ಕರಿಬೂದಿನವರೆಗೆ ವಿಸ್ತರಿಸಿದೆ. ಆದರೆ ಅಲ್ಲಲ್ಲಿ ಸ್ಥಳೀಯ ಸನ್ನಿವೇಶಕ್ಕನುಗುಣವಾಗಿ ಇವುಗಳ ಬಣ್ಣ ಮಾಸಲುಹಳದಿ ಅಥವಾ ಕೆಂಪಗಿರುವುದೂ ಉಂಟು. ಪ್ರತಿಯೊಂದು ವಾರ್ಷಿಕದ ಗಾತ್ರ ನಿರ್ದಿಷ್ಟಪದರದಲ್ಲಿ ಅದರ ಕೆಳಭಾಗದಿಂದ ಮೇಲು ಭಾಗಕ್ಕೇರುತ್ತ ಏರುತ್ತ ತೆಳುವಾಗುವ ಪ್ರವೃತ್ತಿಯನ್ನು ತೋರಿಸುತ್ತಿದ್ದರೂ ಸ್ಥೂಲವಾಗಿ ಒಂದೇ ಸಮನಾಗಿರುತ್ತದೆ. ಅತ್ಯಂತ ಕೆಳಪದರುಗಳು ಸಾಮಾನ್ಯವಾಗಿ ಮರಳಿನಿಂದ ಕೂಡಿದ್ದು ಕೆಲವು ಸೆಂ.ಮೀ.ಗಳಿಂದ ಹಿಡಿದು ಅನೇಕ ಮೀ.ಗಳಷ್ಟು ದಪ್ಪವಾಗಿರಬಹುದು. ಆದರೆ ಅನೇಕ ವಾರ್ಷಿಕಗಳು 0.75 ಸೆಂ.ಮೀ. ಮತ್ತು ಅದಕ್ಕೂ ಕಡಿಮೆ ದಪ್ಪವಾಗಿರುತ್ತವೆ. ಪ್ರತಿಯೊಂದು ಪದರವೂ ತನ್ನ ನೆರೆಹೊರೆಯ ಪದರಕ್ಕಿಂತ ಗಾತ್ರದಲ್ಲಿ ಭಿನ್ನವಾಗಿರುತ್ತದೆ. ಗಾತ್ರದಲ್ಲಿ ಈ ವ್ಯತ್ಯಾಸಗಳು ಸಾಮಾನ್ಯವಾಗಿ ಬೇಸಿಗೆಯ ಮೆಕ್ಕಲಿನ ಗಾತ್ರದಲ್ಲಿನ ವ್ಯತ್ಯಾಸಗಳಿಂದ ಉಂಟಾಗುತ್ತವೆ; ಚಳಿಗಾಲದ ಜೇಡಿಮಣ್ಣು ಗಾತ್ರದಲ್ಲಿ ಹೆಚ್ಚು ಸಮನಾಗಿದೆ.
 
ಇತರ ವಾರ್ಷಿಕಗಳು ಅನೇಕ ಸಿಹಿನೀರಿನ ಸರೋವರನಿಕ್ಷೇಪಗಳಲ್ಲಿ ಕಂಡುಬರುತ್ತವೆ. ಕಾರ್ಬೊನೇಟ್ ಹೆಚ್ಚಾಗಿರುವ ಮತ್ತು ಕಾರ್ಬೊನೇಟ್ ಹೆಚ್ಚಾಗಿರದ ಪರ್ಯಾಯಕ್ರಮದ ಪದರಗಳ ಎಳೆಗಳಲ್ಲಿನ ಕ್ರಮಬದ್ಧವಾದ ವ್ಯತ್ಯಾಸಗಳಿಂದ ಈ ವಾರ್ಷಿಕದಂಥ ತೆಳುಪದರಗಳು ಉಂಟಾಗಬಹುದು. ಈ ಪೊರೆಗಳು ಬಹಳ ತೆಳುವಾಗಿದ್ದರೂ (0.01-0.10 ಮಿ.ಮೀ) ಕೆಲವು ಸಮಯಗಳಲ್ಲಿ ವಾರ್ಷಿಕಪದರಗಳಾಗಿರುವುದು ಕಂಡುಬರುತ್ತವೆ.					
	
(ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ